ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಸಾರ್ಥಕ ಅರ್ಥಗಾರಿಕೆ - ವೇಷಭೂಷಣ ಶಿಬಿರ

ಲೇಖಕರು : ಗುಂಡ್ಮಿ ಸದಾನಂದ ಐತಾಳ
ಶುಕ್ರವಾರ, ನವ೦ಬರ್ 27 , 2015
ಯಕ್ಷಗಾನದಲ್ಲಿ ಆಹಾರ್ಯಾಭಿನಯವು ಒಂದು ಪ್ರಮುಖ ಅಂಗ. ಆಹಾರ್ಯವು ಬಣ್ಣಗಾರಿಕೆ ಮತ್ತು ಉಡುಪು-ತೊಡುಪುಗಳನ್ನು ಒಳಗೊಂಡಿದೆ. ವೇಷಭೂಷಣವೆಂದರೆ ವೇಷ (ಮುಖವರ್ಣಿಕೆ) ಮತ್ತು ಅದಕ್ಕೆ ತಕ್ಕುದಾದ ಉಡುಗೆ - ತೊಡುಗೆಗಳು. ಯಕ್ಷಗಾನ ವೇಷಭೂಷಣಗಳು ಶೈಲಿಬದ್ಧವೂ ಆಕಾರ ಶುದ್ಧವೂ ಪ್ರಮಾಣ ಬದ್ಧವೂ ಆಗಿದ್ದು, ಆಕರ್ಷಣೀಯವಾಗಿವೆ. ಬಣ್ಣಗಾರಿಕೆಯಲ್ಲಿ ಬಳಸಲ್ಪಡುವ ವಿವಿಧ ಬಣ್ಣಗಳು, ರೇಖೆಗಳು, ನಾಮಗಳು, ಮುದ್ರೆಗಳು ಆಯಾ ಪಾತ್ರಗಳ ಶೀಲ-ಸ್ವಭಾವಗಳನ್ನು ಪ್ರತಿನಿಧಿಸುತ್ತವೆ. ಮುಖವರ್ಣಿಕೆಗೆ ಹೊಂದುವಂತೆ ಶಿರೋಭೂಷಣವೇ ಆದಿಯಾಗಿ ಆಭರಣಗಳಿರುತ್ತವೆ. ಇದಕ್ಕೊಂದು ದೀರ್ಘ‌ ಪರಂಪರೆಯೇ ಇದೆ.

ಆದರೆ ಇತ್ತೀಚಿನ ದಿನಗಳಲ್ಲಿ ವೇಷಭೂಷಣಗಳ ಶೈಲಿಗಳಲ್ಲಿ ಅನೇಕ ಮಾರ್ಪಾಟು ಗಳಾಗಿ ಹಿಂದಿನ ಸೊಬಗು, ವೈಭವಗಳು ಮರೆಯಾಗತೊಡಗಿವೆ. ಇಂದಿನ ವೃತ್ತಿಕಲಾವಿದರ ಆದ್ಯತೆಗಳು ಬದಲಾಗುತ್ತಿದ್ದು, ಅವರಿಂದ ಎಲ್ಲ ಸುಧಾರಣೆಗಳನ್ನೂ ನಿರೀಕ್ಷಿಸುವಂತಿಲ್ಲ. ಹವ್ಯಾಸಿಗಳನೇಕರಿಗೆ ವೇಷಭೂಷಣಗಳ ಬಗೆಗಿನ ಜ್ಞಾನ ಸಾಲದು. ಇವೆಲ್ಲವನ್ನೂ ಅನುಲಕ್ಷಿಸಿ, ಅದ್ಭುತವಾದ ಈ ಆಹಾರ್ಯ ಪರಂಪರೆಯನ್ನು ರಕ್ಷಿಸಿ, ಯುವ ಜನಾಂಗಕ್ಕೆ ಪರಿಚಯಿಸಬೇಕೆಂಬ ಕಳಕಳಿಯಿಂದ ಉಡುಪಿ - ಗುಂಡಿಬೈಲಿನ ಯಕ್ಷಗಾನ ಕಲಾಕ್ಷೇತ್ರ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಈಚೆಗೆ ಒಂದು ದಿನದ ಬಣ್ಣಗಾರಿಕೆ - ವೇಷಭೂಷಣಗಳ ಕಮ್ಮಟ - ಪ್ರಾತ್ಯಕ್ಷಿಕೆಯನ್ನು ಆಯೋಜಿಸಿತ್ತು. ಉಡುಪಿ ಪರಿಸರದ ಅತ್ಯಂತ ಪುರಾತನ ಯಕ್ಷ ಸಂಘವಾದ ಕಲಾಕ್ಷೇತ್ರವು ತನ್ನ 64ನೇ ವರ್ಷಾಚರಣೆಯ ಅಂಗವಾಗಿ ಈ ಶಿಬಿರವನ್ನು ಏರ್ಪಡಿಸಿತ್ತು. ಸಂಸ್ಥೆಯ ಗುರು ರತ್ನಾಕರ ಆಚಾರ್ಯ ಮತ್ತು ಉತ್ಸಾಹಿ ಕಾರ್ಯದರ್ಶಿ ಗಣೇಶ್‌ ಕಾಂಚನ್‌ ಅವರ ವಿಶೇಷ ಕಾಳಜಿಯಿಂದ ರೂಪುದಳೆದ ಒಂದು ದಿನದ ಶಿಬಿರಕ್ಕೆ ಹಿರಿಯ ಯಕ್ಷಗಾನ ಗುರು, ವಿದ್ವಾಂಸ, ರಂಗತಜ್ಞ ಸದಾನಂದ ಐತಾಳರು ಸಂಪನ್ಮೂಲ ವ್ಯಕ್ತಿಯಾಗಿಯೂ ಇನ್ನೊಬ್ಬ ಹಿರಿಯ ಕಲಾವಿದ ಕೃಷ್ಣಮೂರ್ತಿ ಉರಾಳರು ವಿಶೇಷ ತಜ್ಞರಾಗಿಯೂ ಆಗಮಿಸಿದ್ದರು. ಸುಮಾರು ಐವತ್ತು ಮಂದಿ ಯುವಕರು, ಯುವತಿಯರು ಮತ್ತು ಬಾಲಕಲಾವಿದರು ಪಾಲ್ಗೊಂಡರು.

ಪೂರ್ವಾಹ್ನ ಉದ್ಘಾಟನೆಯ ಬಳಿಕ ಒಂದೊಂದೇ ಮುಖವರ್ಣಿಕೆಗಳು ತಯಾರಾ ದವು. ಒಂದು ಪೂರ್ಣ ಪ್ರಮಾಣದ ವೇಷಕ್ಕೆ ಸಿದ್ಧರಾಗುವ ಬಗೆಯನ್ನು ಅನುಕ್ರಮವಾಗಿ ಮಾಡಿ ತೋರಿಸಲಾಯಿತು. ಇಜಾರು ಹಾಕಿಕೊಳ್ಳುವುದು, ಮುಖವರ್ಣಿಕೆಯ ಆರಂಭದ ಬೇಸ್‌, ನಾಮ, ಮುದ್ರೆಗಳನ್ನಿಡುವುದು, ಕಣ್ಣು-ಹುಬ್ಬು ಬರೆದುಕೊಳ್ಳುವುದು, ಗೆಜ್ಜೆ, ಕಾಲುಕಡಗಗಳನ್ನು ಕಟ್ಟಿ, ಅಂಡಿನ ಬಟ್ಟೆಗಳನ್ನು ಸುತ್ತಿಕೊಂಡು ಕಸೆ ಸೀರೆಯನ್ನು ಕಚ್ಚೆ ಹಾಕಿ ಉಡುವುದು, ಅನಂತರ ಪೇಟ, ಮುಂದಲೆ ಬಿಗಿಯುವುದು, ಪೇಟವನ್ನು ಮುಸುಕು ಹಾಕಿ, ಗೋಟು-ಜರಿಗಳನ್ನು ಸುತ್ತಿಕೊಳ್ಳುವುದು, ಕರ್ಣಪಾತ್ರ, ಕೇದಗೆ, ತಾವರೆ, ಸುತ್ತು, ಹೂ ಚೆಂಡು, ತುರಾಯಿ ಸಿಕ್ಕಿಸಿಕೊಳ್ಳುವುದು, ದಗಲೆ ಹಾಕಿಕೊಂಡು, ಕೈ ಚಿನ್ನ, ತೋಳ್‌ ಬಾಪುರಿ, ವೀರಗಾಸೆ, ಭುಜಕೀರ್ತಿ, ಹೆಗಲು ವಲ್ಲಿ, ವಡ್ಯಾಣ, ಎದೆಹಾರಗಳನ್ನು ತೊಟ್ಟುಕೊಳ್ಳುವುದು ಇತ್ಯಾದಿಗಳೆಲ್ಲವನ್ನೂ ಹಂತ ಹಂತವಾಗಿ ಪ್ರಾತ್ಯಕ್ಷಿಕೆಗಳ ಮೂಲಕ ಮನದಟ್ಟು ಮಾಡಲಾಯಿತು. ಮೊದಲಿಗೆ ಕೋಡಂಗಿ, ಕಟ್ಟುವೇಷ (ಬಾಲ-ಗೋಪಾಲ), ಪೀಠಿಕಾ ಸ್ತ್ರೀವೇಷ, ಒಡ್ಡೋಲಗ ವೇಷಗಳಾದ ಕೇದಗೆ ಮುಂದಲೆ, ಕಿರೀಟ, ಮುಂಡಾಸುವೇಷಗಳನ್ನು ಸಾಂಪ್ರದಾಯಿಕ ಶೈಲಿಗಳಲ್ಲಿ ಮಾಡಿ ತೋರಿಸಲಾಯಿತು.

ಭೋಜನ ವಿರಾಮದ ಅನಂತರ ಹನುಮಂತ, ಜಾಂಬವಂತ, ವಾಲಿ-ಸುಗ್ರೀವ, ಗಂಡುಬಣ್ಣ, ಹೆಣ್ಣುಬಣ್ಣ, ಘೋರರೂಪಿ, ವೀರಭದ್ರ, ಸಿಂಹ, ಗರುಡ, ಕಾಳಿ, ಶ್ರೀದೇವಿ, ಕಸೆ ಸ್ತ್ರೀವೇಷ, ಕೆಂಪು ಮುಂಡಾಸು, ಕಪ್ಪು ಮುಂಡಾಸು, ಗಂಧರ್ವ, ಕೃಷ್ಣ, ಅರ್ಜುನ, ಕಿರಾತ, ನಾರದ, ಈಶ್ವರ, ನಂದಿ, ರಕ್ಕಸ ದೂತ... ಮುಂತಾದ ವಿಶಿಷ್ಟ ಶೈಲಿಯ ವೇಷಗಳನ್ನು ಪೂರ್ಣ ಪ್ರಮಾಣದ ಭೂಷಣಗಳೊಂದಿಗೆ ಪರಿಚಯಿಸ ಲಾಯಿತು. ಅವಶ್ಯವಿದ್ದೆಡೆ ವೇಷ ಭೂಷಣಗಳ ಶೈಲಿಯ ಔಚಿತ್ಯ - ಮಹತ್ವಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ವಿವರಣೆ ಗಳನ್ನು ನೀಡಿದರು. ರಾಜ ವೇಷ, ರಾಣಿ ವೇಷ, ಅಪ್ಸರೆ, ವಾನರ, ಯಕ್ಷ, ರಾಕ್ಷಸ ವೇಷಗಳ ಮುಖವರ್ಣಿಕೆಗಳ ರೇಖಾ ಚಿತ್ರಗಳನ್ನು ಕೃಷ್ಣಮೂರ್ತಿ ಉರಾಳರು ಕರಿಹಲಗೆಯ ಮೇಲೆ ಬಿಡಿಸಿ ತೋರಿಸಿದರು. ದಿನವಿಡೀ ನಡೆದ ಕಾರ್ಯಾಗಾರದಲ್ಲಿ ಐವತ್ತಕ್ಕೂ ಹೆಚ್ಚಿನ ವೇಷಗಳಿಗೆ ಬೇಕಾದ ಎಲ್ಲ ವೇಷಭೂಷಣಗಳನ್ನು ಒದಗಿಸಿ, ಅವುಗಳನ್ನು ಅಚ್ಚುಕಟ್ಟಾಗಿ ಸಿದ್ಧಗೊಳಿಸಿದ ಹಂದಾಡಿಯ ಬಾಲಕೃಷ್ಣ ನಾಯಕ್‌ ಮತ್ತು ಬಳಗದವರ ಶ್ರಮ ಪ್ರಶಂಸನೀಯ.

ಈ ಕಮ್ಮಟವು ದೂರಗಾಮೀ ಪರಿಣಾಮಗಳನ್ನು ಬೀರುವುದರಲ್ಲಿ ಸಂದೇಹವಿಲ್ಲ. ಹವ್ಯಾಸಿಗಳಿಗೆ, ಮಹಿಳೆಯರು ಮತ್ತು ಎಳೆಯರಿಗೆ ಇಲ್ಲಿನ ವೇಷ ಭೂಷಣಗಳು ತುಸು ಭಾರ ವೆನಿಸುವುದು ಸಹಜ. ಆದರೆ ಈ ರಂಗಭೂಮಿಯ ಸ್ವರೂಪ ಮತ್ತು ಉದ್ದೇಶಗಳಿಗೆ ಅನುಗುಣವಾಗಿಯೇ ಅದರ ಆಹಾರ್ಯಗಳು ಅಭಿವೃದ್ಧಿ ಹೊಂದಿವೆ. ರಂಗದಲ್ಲಿ ಒಂದು ಭಾಮಕ ಲೋಕ ಸೃಷ್ಟಿಸಬೇಕಾದರೆ, ಇಂತಹ ಅಸಹಜ ಮತ್ತು ಘನವಾದ ವೇಷ ಭೂಷಣಗಳ ಆವಶ್ಯಕತೆ ಇದೆ. ಈ ತರಹದ ಮಾದರಿಗಳು ಪ್ರಪಂಚದ ಇನ್ನಿತರ ಯಾವುದೇ ಕಲಾಪ್ರಕಾರದಲ್ಲೂ ಕಾಣಸಿಗುವುದಿಲ್ಲ. ಇದು ಯಕ್ಷಗಾನದ ಬೆಲೆ ಕಟ್ಟಲಾಗದ ಆಸ್ತಿ. ಈ ಆಹಾರ್ಯ ಶ್ರೀಮಂತಿಕೆಯನ್ನು ಯುವ ತಲೆಮಾರಿಗೆ ಹಸ್ತಾಂತರಿಸಿದಾಗಲೇ ಅದು ರಂಗದಲ್ಲಿ ಶಾಶ್ವತವಾಗಿ ನೆಲೆಗೊಳ್ಳುತ್ತದೆ.

ಸಾರ್ಥಕವೆನಿಸಿದ ಈ ಶಿಬಿರದ ಯಶಸ್ಸಿಗಾಗಿ ಶ್ರಮಿಸಿದ ಬಾಬು ಅಮೀನ್‌, ಇಂದ್ರಾಳಿ ಜಯಕರ ಶೆಟ್ಟಿ, ಗುರು ರತ್ನಾಕರ ಆಚಾರ್ಯ, ಗಣೇಶ್‌ ಕೋಟ್ಯಾನ್‌, ಶೀನಪ್ಪ ಸುವರ್ಣ, ಕೇಶವ ಮೂರ್ತಿ ಬೆಲ್ಪತ್ರೆ, ವೇಣುಗೋಪಾಲ ಭಟ್‌, ಡಾ| ರಮೇಶ್‌ ಚಿಂಬಾಳ್ಕರ್‌, ಗೋಪಾಲಕೃಷ್ಣ ಮಲ್ಯ, ಬಾಬು ಗೌಡ... ಮುಂತಾದವರು ಅಭಿನಂದನಾರ್ಹರು.

*********************

ಕೃಪೆ : udayavani


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ